ಪುಲಿಟ್ಸರ್, ಜೋಸೆಫ್
1847-1911. ಅಮೆರಿಕದ ಅತ್ಯಂತ ಪ್ರಭಾವಶಾಲಿ ಹಾಗೂ ಗೌರವಾನ್ವಿತ ಪತ್ರಕರ್ತ, ವೃತ್ತಪತ್ರಿಕಾ ಸಂಪಾದಕ, ಪ್ರಕಾಶಕ. ಹಂಗರಿಯ ಮಾಕೊ ಎಂಬ ಊರಿನಲ್ಲಿ 1847ರ ಏಪ್ರಿಲ್ 10ರಂದು ಜನಿಸಿದ. ಇವನ ಬಾಲ್ಯ ಹಾಗೂ ಶಿಕ್ಷಣ ರಾಜಧಾನಿ ಬುಡಾಪೆಸ್ಟ್‍ನಲ್ಲಿ. ಸೈನ್ಯ ಸೇರಿ ಸೇವೆ ಸಲ್ಲಿಸುವ ಬಯಕೆಯಿಂದ ಹದಿನೇಳನೆಯ ವಯಸ್ಸಿನಲ್ಲಿ ಇವನು ಮನೆಯನ್ನು ತೊರೆದ. ಆಸ್ಟ್ರಿಯ, ಬ್ರಿಟಿಷ್ ಮತ್ತು ಫ್ರೆಂಚ್ ಸೈನ್ಯಗಳನ್ನು ಸೇರಲು ಯತ್ನಿಸಿ ವಿಫಲಗೊಂಡ. ಇವನ ಕೃಶ ಶರೀರ, ಕಣ್ಣಿನ ದೌರ್ಬಲ್ಯ ಇವು ಅಡಚಣೆಯಾದುವು. 1864ರಲ್ಲಿ ಹ್ಯಾಂಬರ್ಗ್‍ನಲ್ಲಿದ್ದ ಅಮೆರಿಕದ ಸರ್ಕಾರಿ ಏಜಂಟನ ನೆರವಿನಿಂದ ಅಮೆರಿಕಕ್ಕೆ ವಲಸೆ ಬಂದ. ಆಗ ನಡೆಯುತ್ತಿದ್ದ ಅಮೆರಿಕ ಅಂತರ್ಯುದ್ಧದಲ್ಲಿ (1861-65) ಸರ್ಕಾರದ ಪರವಾದ ಯೂನಿಯನ್ ಸೈನ್ಯಕ್ಕೆ ಸೇರಿ ರಾಹುತ ದಳದಲ್ಲಿ ಸೇವೆ ಸಲ್ಲಿಸಿದ. ಯುದ್ಧ ಮುಗಿದ ಮೇಲೆ ಸೇಂಟ್ ಲೂಯಿಯಲ್ಲಿ ನೆಲಸಿ ಕೂಲಿಗೆಲಸ ಮಾಡಿಕೊಂಡು ಸ್ವಲ್ಪ ಕಾಲ ಜೀವನ ಸಾಗಿಸಿದ. 1887ರಲ್ಲಿ ಅಮೆರಿಕನ್ ಪೌರನಾದ. 1868ರಲ್ಲಿ ವೆಸ್ಟ್‍ಲಿಷೆ ಪೋಸ್ಟ್ ಎಂಬ ಜರ್ಮನ್ ಭಾಷಾ ಪತ್ರಿಕೆಯ ವರದಿಗಾರನಾದ. ಆಗ ಇವನ ಜೀವನ ವಿಧಾನದಲ್ಲಿ ಕ್ರಾಂತಿಯೇ ಉಂಟಾಯಿತು. ತನ್ನ ಪ್ರತಿಭಾಪೂರ್ಣ ಕಾರ್ಯದಿಂದ ಅತಿ ಶೀಘ್ರಮನ್ನಣೆಗಳಿಸಿಕೊಂಡು 1871ರ ವೇಳೆಗೆ ಆ ಪತ್ರಿಕೆಯ ಒಡೆತನದಲ್ಲಿ ಪಾಲುದಾರನಾದ. ಸ್ವಲ್ಪ ಕಾಲದಲ್ಲೇ ತನ್ನ ಪಾಲನ್ನು ಲಾಭಕ್ಕೆ ಮಾರಿದ. ಈ ಮಧ್ಯೆ ರಾಜಕಾರಣದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದ. 1869ರಲ್ಲಿ ಮಿಸೂರಿ ರಾಜ್ಯದ ವಿಧಾನಸಭೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ. ಇವನ ಪ್ರಗತಿಗಾಮಿ ಧೋರಣೆಗಳಿಂದ ಸುಧಾರಣಾವಾದಿಯೆಂಬ ಖ್ಯಾತಿ ಪಡೆದ. 1871-72ರಲ್ಲಿ ಮಿಸೂರಿಯ ಲಿಬರಲ್ ರಿಪಬ್ಲಿಕನ್ ಪಕ್ಷವನ್ನು ಸಂಘಟಿಸಲು ಸಹಕರಿಸಿದ. 1872ರಲ್ಲಿ ರಾಷ್ಟ್ರದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತ. ಹೊರೇಸ್ ಗ್ರೀಲಿಯ ಪರವಾಗಿ ವ್ಯಾಪಕ ಪ್ರಚಾರ ಮಾಡಿ ನಿರಾಶನಾದ. ಅನಂತರ ಡೆಮೊಕ್ರಾಟ್ ಪಕ್ಷಕ್ಕೆ ಸೇರಿಕೊಂಡ. ಆ ಪಕ್ಷದಲ್ಲಿದ್ದ ತನ್ನ ನಿಷ್ಠೆಯನ್ನು ಕೊನೆಯವರೆಗೂ ತೊರೆಯಲಿಲ್ಲ. 1874ರಲ್ಲಿ ಸೇಂಟ್ ಲೂಯಿಯ ಸ್ಟಾಟ್ಜ್ ಸೈಟುಂಗ್ ಎಂಬ ಇನ್ನೊಂದು ಜರ್ಮನ್ ಪತ್ರಿಕೆಯನ್ನು ಕೊಂಡು ಅಸೋಸಿಯೇಟ್ ಪ್ರೆಸ್‍ನಲ್ಲಿ ಅದರ ಸದಸ್ಯತ್ವವನ್ನು ಅದೇ ಊರಿನ ಗ್ಲೋಬ್ ಪತ್ರಿಕೆಗೆ ಮಾರಿ ಲಾಭ ಗಳಿಸಿದ. ಕಾನೂನಿನ ಅಧ್ಯಯನ ಮಾಡಲು ಈ ಹಣವನ್ನು ಬಳಸಿಕೊಂಡ. 1876ರಲ್ಲಿ ವಾಷಿಂಗ್‍ಟನ್ನಿನಲ್ಲಿ ನ್ಯೂಯಾರ್ಕಿನ ದಿನ ಪತ್ರಿಕೆಯ ವರದಿಗಾರನೂ ಆಗಿದ್ದ. 1878ರಲ್ಲಿ ಸೆಂಟ್ ಲೂಯಿಯಲ್ಲಿ ಕುಸಿಯುತ್ತಿದ್ದ ಡಿಸ್ಪ್ಯಾಚ್ ಪತ್ರಿಕೆಯನ್ನೂ ಪೋಸ್ಟ್ ಪತ್ರಿಕೆಯನ್ನೂ ವಹಿಸಿಕೊಂಡ. ಇವೆರಡೂ ಕೂಡಿ ಪೋಸ್ಟ್-ಡಿಸ್ಪ್ಯಾಚ್ ಎಂಬ ಹೆಸರಿನ ಪತ್ರಿಕೆ ಹೊರಡತೊಡಗಿತು. ಈ ಪತ್ರಿಕೆ ಬಲು ಬೇಗ ಪ್ರಭಾವಶಾಲಿ ಸಂಜೆ ಪತ್ರಿಕೆಯಾಯಿತು. ಐದೇ ವರ್ಷಗಳಲ್ಲಿ ಇದು ನಗರದ ಅತ್ಯಂತ ಹೆಚ್ಚಿನ ಪ್ರಸಾರದ ದಿನಪತ್ರಿಕೆಯಾಯಿತು. ಸುದ್ದಿ ನಿಖರತೆಗೆ ವ್ಯಾಪಕ ಸುದ್ದಿ ಸಂಗ್ರಹಕ್ಕೆ ಪ್ರಾಶಸ್ತ್ಯ ನೀಡುವುದರ ಜೊತೆಗೆ ಲಂಚ, ದುಬಾರಿ ತೆರಿಗೆ, ಭ್ರಷ್ಟ ರಾಜಕಾರಣ ಇವುಗಳ ವಿರುದ್ಧ ಪ್ರಬಲ ಹೋರಾಟ ನಡೆಸುವುದು ಇವನ ಸಂಪಾದಕೀಯ ನೀತಿಯಾಗಿತ್ತು. 1882ರ ಅಕ್ಟೋಬರ್‍ನಲ್ಲಿ ಪುಲಿಟ್ಸರ್ ಸಂಸ್ಥೆಯ ಪ್ರಧಾನ ಸಂಪಾದಕ ಲೇಖಕನೊಬ್ಬ ಪತ್ರಿಕೆಯ ರಾಜಕೀಯ ವಿರೋಧಿಯೊಬ್ಬನಿಗೆ ಗುಂಡಿಕ್ಕಿದ ಪ್ರಕರಣ ವಿಕೋಪಕ್ಕೆ ತಿರುಗಿ ಪತ್ರಿಕೆ ಸಾರ್ವಜನಿಕರ ಸಹಾನುಭೂತಿ ಕಳೆದುಕೊಂಡು ನಷ್ಟಕ್ಕೊಳಗಾಯಿತು. ಜೊತೆಗೆ ಪುಲಿಟ್ಸರನ ದೇಹಾರೋಗ್ಯವೂ ಕ್ಷೀಣಿಸಿತು. ಅಮೆರಿಕನ್ ಪತ್ರಿಕೋದ್ಯಮದ ಮಹಾವೇದಿಕೆಯಾದ ನ್ಯೂಯಾರ್ಕ್ ನಗರಕ್ಕೆ ಪುಲಿಟ್ಸರ್ ಬಂದು, 1883ರ ಮೇ 10 ರಂದು ಅಲ್ಲಿಯ ವಲ್ರ್ಡ್ ಎಂಬ ಪತ್ರಿಕೆಯನ್ನು ಕೊಂಡ. ಕ್ಷೀಣಗೊಳ್ಳುತ್ತಿದ್ದ ಈ ಪತ್ರಿಕೆ ಹೊಸ ಸೃಜನಶೀಲ ಮಾಲೀಕತ್ವದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿತು. ನಾಲ್ಕೇ ವರ್ಷಗಳಲ್ಲಿ ಇದರ ಪ್ರಸಾರ ಎರಡೂವರೆ ಲಕ್ಷವನ್ನು ದಾಟಿ ದಾಖಲೆ ಸ್ಥಾಪಿಸಿತು. 1886 ರ ವೇಳೆಗೆ ಇದರ ವಾರ್ಷಿಕ ಗಳಿಕೆ 5 ಲಕ್ಷ ಡಾಲರ್‍ಗಳನ್ನೂ ಮೀರಿತ್ತು. 1887 ರಿಂದ ಬೆಳಗಿನ ಪತ್ರಿಕೆಗೆ ಪೂರಕವಾಗಿ ಈವ್‍ನಿಂಗ್ ವಲ್ರ್ಡ್ ಎಂಬ ಸಂಜೆ ಪತ್ರಿಕೆಯೂ ಹೊರಡತೊಡಗಿತು. 1885ರಲ್ಲಿ ನ್ಯೂಯಾರ್ಕಿನಿಂದ ಅಮೆರಿಕನ್ ಕಾಂಗ್ರೆಸ್‍ಗೆ ಪುಲಿಟ್ಸರ್ ಚುನಾಯಿತನಾದ. ಕೆಲವೇ ತಿಂಗಳಲ್ಲಿ ರಾಜಿನಾಮೆ ಸಲ್ಲಿಸಿ ಪತ್ರಿಕೋದ್ಯಮದಲ್ಲೇ ತನ್ನ ಗಮನವನ್ನು ಕೇಂದ್ರೀಕರಿಸಿದ. ಇವನ ಸಂಪಾದಕೀಯ ಧೋರಣೆ ಶ್ಲಾಘನೀಯವಾದ್ದಾಗಿತ್ತು. ಹೋರಾಟ ಮನೋಭಾವದ ಸ್ವಾತಂತ್ರ್ಯಪೂರ್ಣ ಸಂಪಾದಕೀಯಕ್ಕೆ ಇವನ ಪತ್ರಿಕೆಗಳಲ್ಲಿ ಪೂರ್ಣ ಅವಕಾಶವಿತ್ತು. ಸರ್ಕಾರದ ಭ್ರಷ್ಟಾಚಾರ ಹಾಗೂ ಬಡವರ ಶೋಷಣೆಯ ವಿರುದ್ಧ ಸತತ ಹೋರಾಟ ನಡೆಸಿದ ಪುಲಿಟ್ಸರ್‍ಗೆ ಕಾರ್ಮಿಕರ ಹೋರಾಟದಲ್ಲೂ ಸಹಾನುಭೂತಿಯಿತ್ತು. 1892ರಲ್ಲಿ ನಡೆದ ಉಕ್ಕು ಕಾರ್ಮಿಕರ ಮುಷ್ಕರಕ್ಕೆ ಇವನಿಂದ ಪೂರ್ಣ ಬೆಂಬಲ ದೊರಕಿತು. ರಾಷ್ಟ್ರದ ಜನತೆಯ ಬಾಯಿಮಾತಾಗಿದ್ದ ವಲ್ರ್ಡ್ ಪತ್ರಿಕೆ ಮನೋರಂಜನೆಯ ಪ್ರಚೋದಕ ಸುದ್ದಿಗಳನ್ನು ಸ್ವಾರಸ್ಯವಾಗಿ ಜೀವಂತ ಶೈಲಿಯಲ್ಲಿ ಪ್ರಕಟಿಸತೊಡಗಿ ಪತ್ರಿಕೋದ್ಯಮದಲ್ಲಿ ಹೊಸಮಾರ್ಗವನ್ನು ರೂಪಿಸಿತು. ಅತ್ಯಾಧುನಿಕ ಯಂತ್ರಗಳಿಂದ ಸಜ್ಜುಗೊಂಡು ಆಕರ್ಷಕ ಮುದ್ರಣ ಕಾಣುತ್ತಿದ್ದ ಪತ್ರಿಕೆ 1890ರಲ್ಲಿ ವರ್ಣಮುದ್ರಣ ಕಾಲಿಡುತ್ತಿದ್ದಂತೆಯೇ ಭಾನುವಾರ ಸಂಚಿಕೆ ಹಾಗೂ ವಿನೋದ ಚುಟಕಗಳನ್ನು ವರ್ಣರಂಜಿತವಾಗಿ ಪ್ರಕಟಿಸತೊಡಗಿತು. 1898ರ ಸ್ಪ್ಯಾನಿಷ್-ಅಮೆರಿಕನ್ ಯುದ್ಧದ ಆರಂಭಕ್ಕೆ ಪ್ರಚೋದನೆ ನೀಡಿದ ಪತ್ರಿಕೆಗಳಲ್ಲಿ ಇದೂ ಒಂದು. ನ್ಯೂಯಾರ್ಕ್ ರಾಜ್ಯದ ಶಾಸನ ಸಭೆ 1906ರಲ್ಲಿ ವಿಮಾ ಕಂಪನಿಗಳ ವ್ಯವಹಾರದ ತನಿಖೆಯನ್ನು ಕೈಗೊಳ್ಳಲು ವಲ್ರ್ಡ್ ಪತ್ರಿಕೆಯೇ ಕಾರಣ. ಫ್ರೆಂಚ್ ಪನಾಮಾ ಕಂಪೆನಿಗೆ ಅಮೆರಿಕ ನೀಡಿದ ಹಣದ ಸಂಬಂಧವಾಗಿ ಈ ಪತ್ರಿಕೆ ತಳೆದ ಧೋರಣೆ ಹಾಗೂ ಪ್ರಕಟಿಸಿದ ಬರಹಗಳಿಂದಾಗಿ ಪುಲಿಟ್ಸರ್ 1909ರಲ್ಲಿ ಮಾನನಷ್ಟ ಮೊಕದ್ದಮೆಯೊಂದನ್ನು ಎದುರಿಸಬೇಕಾಯಿತು. ವಯಸ್ಸಾದಂತೆ ದೇಹಾರೋಗ್ಯ ಹದಗೆಟ್ಟು, ಕಣ್ಣಿನ ದೌರ್ಬಲ್ಯವೂ ಅಧಿಕವಾಗಿ ಪುಲಿಟ್ಸರ್ ಆಡಳಿತ ನಿರ್ವಹಣೆಯಿಂದ ದೂರವಾಗಿ ಸಂಪಾದಕತ್ವವನ್ನು ಬಿಟ್ಟುಕೊಟ್ಟಿದ್ದರೂ ಪತ್ರಿಕಾ ಧೋರಣೆಯ ಸೂತ್ರಗಳನ್ನು ಮಾತ್ರ ನಿಯಂತ್ರಿಸುತ್ತಿದ್ದ. ಕೋಟ್ಯಧೀಶ್ವರನಾಗಿದ್ದ ಪುಲಿಟ್ಸರ್ 1911 ಅಕ್ಟೋಬರ್ 29ರಂದು ಸೌತ್ ಕ್ಯಾರಲೈನನ ಚಾಲ್ರ್ಸ್‍ಟನ್ ನಗರದಲ್ಲಿ ನಿಧನ ಹೊಂದಿದ. ಇವನು ದತ್ತಿಯಾಗಿ ನೀಡಿದ 20 ಲಕ್ಷ ಡಾಲರ್ ಹಣದಿಂದ ಕೊಲಂಬಿಯ ವಿಶ್ವವಿದ್ಯಾಲಯದಲ್ಲಿ ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಮ್ ಎಂಬ ಪತ್ರಿಕೋದ್ಯಮ ಶಿಕ್ಷಣ ಸಂಸ್ಥೆಯನ್ನೂ (1912), ಪುಲಿಟ್ಸರ್ ಪ್ರಶಸ್ತಿಗಳನ್ನೂ ಸ್ಥಾಪಿಸಲಾಯಿತು. ಪುಲಿಟ್ಸರ್ 1878ರಲ್ಲಿ ಮದುವೆಯಾಗಿದ್ದ. ಹೆಂಡತಿ ಕಾನ್‍ಫೆಡರೇಟ್ ಅಧ್ಯಕ್ಷ ಜೆಫರ್‍ಸನ್ ಡೇವಿಸ್ ಸಂಬಂಧಿ. ಇವನ ಮಗ ಕಿರಿಯ ಜೊಸೆಫ್ ಪುಲಿಟ್ಸರ್ (1885-1955). ಸೇಂಟ್ ಲೂಯಿ ಪೋಸ್ಟ್-ಡಿಸ್ಪ್ಯಾಚ್‍ನ ಸಂಪಾದಕನಾಗಿದ್ದ. ಪುಲಿಟ್ಸರನ ಉಯಿಲಿನ ಪ್ರಕಾರ ವಲ್ರ್ಡ್ ಪತ್ರಿಕೆಯನ್ನು ಎಂದಿಗೂ ಮಾರಕೂಡದಾಗಿತ್ತು. ಆದರೆ ಆರ್ಥಿಕ ನಷ್ಟದಿಂದ ಮುಳುಗುತ್ತಿದ್ದ ಈ ಪತ್ರಿಕೆಯನ್ನು ಮಾರಲು 1931ರಲ್ಲಿ ನ್ಯಾಯಾಲಯ ಅವಕಾಶ ನೀಡಿತು. 

ಶ್ರೇಷ್ಠ ಮಟ್ಟದ ಸಾರ್ವಜನಿಕ ಸೇವೆ ಹಾಗೂ ಅಮೆರಿಕನ್ ಪತ್ರಿಕೋದ್ಯಮ ಮತ್ತು ಸಾಹಿತ್ಯದಲ್ಲಿಯ ಉನ್ನತ ಸಾಧನೆಗೆ 1917 ರಿಂದ ಪ್ರತಿ ವರ್ಷವೂ ಮೇ ತಿಂಗಳಲ್ಲಿ ಪುಲಿಟ್ಸರ್ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ವ್ಯವಸ್ಥೆಯ ನಿರ್ವಾಹಕರು ಕೊಲಂಬಿಯ ವಿಶ್ವವಿದ್ಯಾಲಯದಲ್ಲಿಯ ನ್ಯಾಸಧಾರಿಗಳು, ಪತ್ರಿಕೋದ್ಯಮ ಕ್ಷೇತ್ರಕ್ಕೆಂದು ಎಂಟು ಪ್ರಶಸ್ತಿಗಳಿವೆ; ವೃತ್ತಪತ್ರಿಕೆ ಸಲ್ಲಿಸಿದ ಅತ್ಯಂತ ಶ್ಲಾಘನೀಯ ಸಾರ್ವಜನಿಕ ಸೇವೆಗೆ, ಶ್ರೇಷ್ಠ ಸ್ಥಳೀಯ ವರದಿಗೆ ಕಾಲಗಡುವಿನ ಒತ್ತಾಯವಿಲ್ಲದೆ ನಿರೂಪಿಸಿದ ಶ್ರೇಷ್ಠ ಸ್ಥಳೀಯ ವರದಿಗೆ, ರಾಷ್ಟ್ರೀಯ ಸುದ್ದಿಯ ಶ್ರೇಷ್ಠ ವರದಿಗೆ, ಅಂತರರಾಷ್ಟ್ರೀಯ ವ್ಯವಹಾರಗಳ ಶ್ರೇಷ್ಠ ವರದಿಗೆ, ಅತ್ಯುತ್ತಮ ಸಂಪಾದಕೀಯಕ್ಕೆ, ಶ್ರೇಷ್ಠ ಕಾರ್ಟೂನ್ ಚಿತ್ರಕ್ಕೆ, ಶ್ರೇಷ್ಠ ಸುದ್ದಿ ಛಾಯಾಗ್ರಹಣಕ್ಕೆ ಈ ಬಹುಮಾನಗಳು ಸಲ್ಲುತ್ತವೆ. ಅಮೆರಿಕನ್ ವಸ್ತುವುಳ್ಳ ಶ್ರೇಷ್ಠ ಕಾದಂಬರಿಗೆ ಶ್ರೇಷ್ಠ ನಾಟಕಕ್ಕೆ, ಶ್ರೇಷ್ಠ ಕಾವ್ಯಸಂಕಲನಕ್ಕೆ, ಅಮೆರಿಕನ್ ಇತಿಹಾಸವನ್ನು ಕುರಿತ ಶ್ರೇಷ್ಠ ಕೃತಿಗೆ, ಸಾರ್ವಜನಿಕ ಸೇವೆ ಹಾಗೂ ದೇಶಾಭಿಮಾನ ವಸ್ತುವಾಗುಳ್ಳ ಶ್ರೇಷ್ಠ ಜೀವನಚರಿತ್ರೆ ಅಥವಾ ಆತ್ಮಕಥೆಗೆ-ಹೀಗೆ ಅಮೆರಿಕನ್ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಐದು ಬಹುಮಾನಗಳಿವೆ. 1943ರಿಂದ ಶ್ರೇಷ್ಠ ರಾಗಸಂಯೋಜನೆಗೂ ಪ್ರಶಸ್ತಿಯೊಂದನ್ನು ನೀಡಲಾಗುತ್ತಿದೆ. 								 (ಎಸ್.ಎಸ್.ಎಂಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ